ಚಿಚೇನ್ - ಇಟ್ಸಾ

	ಮೆಕ್ಸಿಕೋದ ಒಂದು ಹಳ್ಳಿ. ವ್ಯಾಲಡೊಲಿಡ್‍ನ ಪಶ್ಚಿಮಕ್ಕೆ ಯೂಕಟಾನ್ ರಾಜ್ಯದಲ್ಲಿ, ಪ.ರೇ 880 30' ಮತ್ತು ಉ.ಅ.200 30' ಮೇಲಿದೆ. ಅಲ್ಲಿ ಇದೇ ಹೆಸರಿನ ಪುರಾತನ ಮಾಯ ನಗರದ ಅವಶೇಷಗಳಿವೆ. ಚಿಚೇನ್-ಇಟ್ಸಾದ ಸುತ್ತಣ ಪ್ರದೇಶ ಸುಣ್ಣಕಲ್ಲಿನ ನೆಲ. ನೆಲದ ಅಡಿಯಲ್ಲಿ ನೀರಿನ ವಸತಿಯಿದೆ. ಸುಣ್ಣಕಲ್ಲಿನ ಕವಚ ಕುಸಿದು ಬಿದ್ದಿರುವ ಕೆಲವು ಎಡೆಗಳಲ್ಲಿ ಮಾತ್ರ ನೀರು ಮೇಲಕ್ಕೆ ಹರಿಯುತ್ತದೆ. ಇದನ್ನು ಆ ಪ್ರದೇಶದಲ್ಲಿದ್ದ ಮಾಯ ಜನ ಸೆನೋಟ್ ಎಂದು ಕರೆದಿದ್ದಾರೆ. ಎರಡು ದೊಡ್ಡ ಸೆನೋಟ್‍ಗಳಿದ್ದ ಸ್ಥಳದಲ್ಲಿ ನಗರ ಸ್ಥಾಪಿತವಾಗಿತ್ತು. ಅಲ್ಲಿ ಮೊದಲು ನೆಲಸಿದ್ದ ಮಾಯನ್ ಗುಂಪಿನ ಹೆಸರು ಇಟ್ಸಾ. ಮಾಯನ್ ಭಾಷೆಯಲ್ಲಿ ಚಿಚೇನ್ ಎಂದರೆ ಬಾವಿಗಳ (ಚೇನ್) ಬಾಯಿಗಳು (ಚಿ).

	530ಕ್ಕಿಂತ ಮುಂಚೆ ಸ್ಥಾಪಿತವಾದ ಈ ನಗರ ಮೊದಲ ಒಂದು ಶತಮಾನ ಕಾಲಮಾಯ ನಾಗರಿಕತೆಯ ಪ್ರದೇಶದ ಅಂಚಾಗಿತ್ತು. ಹಳೆಯ ಮಾಯ ಸಾಮ್ರಾಜ್ಯ ಇದಕ್ಕೆ ದಕ್ಷಿಣದಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿತ್ತು. ಒಂದು ಶತಮಾನದ ಅನಂತರ ದಕ್ಷಿಣದ ಹಳೆಯ ಮಾಯ ನಗರಗಳನ್ನು ತ್ಯಜಿಸಿದಾಗ ಇಟ್ಸಾ ಗುಂಪಿನ ಜನರು ಚಿಚೇನ್-ಇಟ್ಸಾವನ್ನು ತಾತ್ಕಾಲಿಕವಾಗಿ ತ್ಯಜಿಸಿ (668), ಪಶ್ಚಿಮಕ್ಕೆ ಹೋಗಿ, ಈಗಿನ ಕ್ಯಾಂಪೀಚೆಯ ದಕ್ಷಿಣದಲ್ಲಿ ಚಾಕನ್‍ಪುಟನ್ ನಗರವನ್ನು ಸ್ಥಾಪಿಸಿದರು. ಇದು 944ರಲ್ಲಿ ಅಗ್ನಿಗೆ ಆಹುತಿಯಾಯಿತು. ಇಟ್ಸಾ ಗುಂಪಿನ ಪುರೋಹಿತರು ತಮ್ಮ ಜನರನ್ನು ಮತ್ತೆ ಚಿಚೇನ್-ಇಟ್ಸಾಗೆ ಕರೆದುಕೊಂಡು ಹೋದರು; ಅಲ್ಲಿ ಮತ್ತೆ ತಮ್ಮ ದೇಗುಲಗಳನ್ನು ಕಟ್ಟಿದರು. ಹೊಸ ಸಾಮ್ರಾಜ್ಯ ಸ್ಥಾಪನೆಯ ಕಾಲವದು. ಆಗ ಮಾಯ ಸಂಸ್ಕøತಿಯ ಪುನರುಜ್ಜೀವನವಾಯಿತು. ಅನೇಕ ನಗರಗಳು ಬೆಳೆದವು. ಕ್ರಿ.ಶ. 11-13ನೆಯ ಶತಮಾನಗಳಲ್ಲಿ ಈ ಸಂಸ್ಕøತಿ ಉಚ್ಛ್ರಾಯಸ್ಥಿತಿಯಲ್ಲಿತ್ತು. ಚಿಚೇನ್ — ಇಟ್ಸಾ ಆಗ ಒಂದು ದೊಡ್ಡ ನಗರವೂ ದೇವಾಲಯಗಳ ಬೀಡೂ ಮಾಯ ಸಂಸ್ಕøತಿಯ ಕೇಂದ್ರವೂ ಆಗಿತ್ತು. ಅಲ್ಲಿರುವ ಅತ್ಯಂತ ಭವ್ಯ ಸ್ಮಾರಕಗಳಲ್ಲಿ ಎಲ್ ಕಾಸ್ಟಿಲೊ ಮತ್ತು ಹುಲಿ ದೇವಾಲಯಗಳು, ಕರಕೋಲ್ ಎಂಬ ಖಗೋಳ ವೀಕ್ಷಣ ಸ್ತಂಭ, ಸಾವಿರ ಕಂಬಗಳ ಸಭಾಂಗಣ (ಬಹುಶಃ ಹಿಂದಿನ ಸಂತೆಕಟ್ಟೆ) ಮತ್ತು ಬಾವಿ ಮುಖ್ಯವಾದವು. ಬಾವಿಗಳಿಗೆ ಮಾಯನ್ ಜನರು ಯುವತಿಯರನ್ನು ಬಲಿಕೊಡುತ್ತಿದ್ದರು. ಸ್ಪ್ಯಾನಿಷರ ಆಕ್ರಮಣದಿಂದ ಮಾಯ ಸಂಸ್ಕøತಿಯ ಈ ನಗರ ಹಾಳಾಯಿತು.	  								(ಎ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ